IMPORTANT NOTICE

New official website is designed for Karada Community. Please visit www.karadavishwa.com for more details.

Monday, 13 April 2015

ಕುರಿಗಳು, ಸಾರ್, ಕುರಿಗಳು ..... / Kurigalu Saar Kurigalu.....

           - 1 - 

ಕುರಿಗಳು, ಸಾರ್, ಕುರಿಗಳು;
ಸಾಗಿದ್ದೇ
ಗುರಿಗಳು.

ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ
ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ,
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲುಕಡ್ಡಿ ಮೇವು, ಅಂಡಲೆಯುವ ನಾವು ನೀವು,
ಕುರಿಗಳು, ಸಾರ್, ಕುರಿಗಳು;
ನಮಗೋ ನೂರು ಗುರಿಗಳು.

ಎಡ ದಿಕ್ಕಿಗೆ, ಬಲ ದಿಕ್ಕಿಗೆ, ಒಮ್ಮೆ ದಿಕ್ಕುಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೋ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ, ಮುಂದೆ ಬರಲು ಹಾಯದ
ಅವರು, ಇವರು, ನಾವುಗಳು
ಕುರಿಗಳು, ಸಾರ್, ಕುರಿಗಳು,


                      - 2 -

ಮಂದೆಯಲ್ಲಿ ಎಲ್ಲವೊಂದೆ ಆದಾಗಲೇ ಸ್ವರ್ಗ ಮುಂದೆ --
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆ ಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆ ಬೆಲೆಯ ಸುಧಾರಿಸಿ,
ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ,
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು, ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು? 


                   - 3 -

ನಮ್ಮ ಕಾಯ್ವ ಕುರುಬರು:
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು,
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನ್ನು ಒತ್ತುವವರು;
ಜಮಾಬಂದಿಗಮಲ್ದಾರ ಬರಲು ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚ ಹಿರಿದು ಕಚಕ್ಕೆಂದು ಕೊಚ್ಚಿ ಕತ್ತ,
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ,
ಕಿಸೆಗೆ ಹಸಿರು ನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು.
ಬಿಸಿಲಿನಲ್ಲಿ ನಮ್ಮ ದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು,
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು.
ಬೆಟ್ಟ ದಾಟಿ ಕಿರುಬ ನುಗ್ಗಿ, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತಿದ್ದರೂ  --
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು,
ನಮ್ಮ ಕಾಯ್ವ ಗೊಲ್ಲರು.


                      - 4 -


ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ,
ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ,
ದೀಪದ ದೌಲತ್ತು ಇಲ್ಲ,
ಗಾಳಿಯ ಗಮ್ಮತ್ತು ಇಲ್ಲ.

ಕಿಂಡಿಯಿಂದ ತೆವಳಿ ಬಂದ ಗಾಳಿ ಕೂಡ ನಮ್ಮದೇನೆ;
ನಮ್ಮ ಮುಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪು ಸವರಿ
ಒಣಗಲಿಟ್ಟ ಹಸಿ ತೊಗಲಿನ ಬಿಸಿಬಿಸಿ ಹಬೆ ವಾಸನೆ,
ಇರಿಯುತಿಹುದು ಮೂಗನೆ!
ಕೊಬ್ಬಿರುವೀ ಮಬ್ಬಿನಲ್ಲಿ, ಮೈ ನಾತದ ಗಬ್ಬಿನಲ್ಲಿ,
ಇದರ ಉಸಿರು ಅದು, ಮತ್ತೆ ಅದರ ಉಸಿರು ಇದು ಮೂಸಿ --
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮ ನಾವೆ ಅಂದುಕೊಂಡೊ, ಉಗುಳು ನುಂಗಿ ನೊಂದುಕೊಂಡೊ,
ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು --
ಕುರಿಗಳು, ಸಾರ್, ಕುರಿಗಳು.

ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೋ ಆಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ,
ಕಣ್ಣು ಕುಕ್ಕಿ ಸೊಕ್ಕಿರುವ, ಹೋಗಿ ಹೋಗಿ ನೆಕ್ಕಿರುವ,
ಕತ್ತನದಕೆ ತಿಕ್ಕಿರುವ,
ನಾವು, ನೀವು, ಅವರು, ಇವರು
ಕುರಿಗಳು, ಸಾರ್, ಕುರಿಗಳು!

ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳದ ಕಿಚ್ಚಿನಲ್ಲಿ,
ಮನೆಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು!
ಕುರಿಗಳು, ಸಾರ್, ಕುರಿಗಳು .....

                                                                       - ಕೆ. ಎಸ್. ನಿಸಾರ್ ಅಹಮದ್

No comments:

Post a Comment