Wednesday, 8 April 2015

ನನ್ನವಳು ನನ್ನೆದೆಯ ಹೊನ್ನಾಡನಾಳುವಳು / Nannavalu nannedeya honnadanaaluvalu

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ||ಪ||

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ…
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ.

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ.

                                                                          - ಕೆ. ಎಸ್. ನರಸಿಂಹ ಸ್ವಾಮಿ 

* ಕೆ.ಎಸ್.ನ ಅವರ ಇರುವಂತಿಗೆ ಕವನಸಂಕಲನದ ಒಂದು ಮಾರ್ದವತೆ ತುಂಬಿದ ಕವನ. 1968 ರಲ್ಲಿ ಬಂದ ಸರ್ವಮಂಗಳ ಚಿತ್ರಕ್ಕೆ ಬಳಕೆಯಾಗಿದೆ.

No comments:

Post a Comment