Monday, 13 April 2015

ನಾ ಮೇಲಿನವನು ಬಲು ದೊಡ್ಡವನು / Naa melinavanu balu doddavanu...

ನಾ ಮೇಲಿನವನು ಬಲು ದೊಡ್ಡವನು ಎಂದು,
ಮೆರೆದಾಡ ಬೇಡ ಗೆಳೆಯ.
ನಿನಗಿಂತ ಮಿಗಿಲವರು ಇದ್ದಾರೂ ಬುವಿಯಲ್ಲಿ,
ಸುಳ್ಳು ಭ್ರಮೆಯಲ್ಲಿ ನೀ ಮುಳುಗಬೇಡ.

ಬಲುದೊಡ್ಡ ಚಂದಿರನು ಇರುಳೆಲ್ಲ ಬೆಳಗುವನು
ಮರೆಯಾಗುವನು ಹಗಲ ಕಿರಣದಲ್ಲಿ.
ಉರಿಯುವನು ಸೂರ್ಯ ಅವನಿಗಿಂತ ಹಿರಿಯ
ಕಳೆದು ಹೋಗುವನು ಇರುಳ ಸೆರಗಿನಲ್ಲಿ.

ಗ್ರಹತಾರೆಗಳ ಹೊತ್ತ ಗಗನಕೆ ಮರೆಯುಂಟೆ
ಸಾರಿ ಹೇಳಿತೆ ತಾ ಮಿಗಿಲು ಎಂದು.
ಅಣುವಲ್ಲಿ ಅಣುವಾದ ಕಣ್ಣಿದ್ದೂ ಕುರುಡಾದ
ನೀ ಕೂಗಬಹುದು ಹಾಗೆಂದು.

ಮಣ್ಣು ಮೊಳಕೆಯ ಹುಟ್ಟು ಬೀಜವೃಕ್ಷದ ಗುಟ್ಟು
ಬೆರಗುಗೊಳಿಸುವುದಿಲ್ಲವೇನು
ಗಿರಿ ಝರಿಯ ಒರತೆ ಜೀವರಾಶಿಯ ಚರಿತೆ
ರೋಮಾಂಚನಗೊಳಿಸದೇನು.

ಜನನ ಮರಣದ ಒಗಟ ಬಿಚ್ಚಿ ಹೇಳುವೆಯೇನು
ಲೋಕದೊಳಿತಿಗೆ ನಿನ್ನ ಕಾಣಿಕೆ ಏನು?
ಹೇಳು ಗೆಳೆಯನೆ ಈಗ ಎದೆ ತಟ್ಟಿ ನೀ ಹೇಳು
ಪ್ರಕೃತಿಯ ಹಿರಿತನಕೆ ನೀ ಸಾಟಿಯೇನು??

                                                                     - ಬಿ. ಟಿ. ಲಲಿತಾ ನಾಯಕ್ 

No comments:

Post a Comment